ಕಾನ್‍ಸ್ಟಂಟೈನರು

 ರೋಂ ಮತ್ತು ಬಿಜಾóಂಟಿನ್ ಸಾಮ್ರಾಜ್ಯವನ್ನು ಈ ಹೆಸರಿನ 11 ಮಂದಿ ಚಕ್ರವರ್ತಿಗಳು ವಿವಿಧ ಕಾಲಗಳಲ್ಲಿ ಆಳಿದರು. ಅವರಲ್ಲಿ ಮುಖ್ಯರಾದವರ ಪರಿಚಯವನ್ನು ಇಲ್ಲಿ ಕೊಡಲಾಗಿದೆ.

 1ನೆಯ ಕಾನ್‍ಸ್ಟಂಟೈನ್ : (ಫ್ಲೇವಿಯಸ್ ವಲೆರಿಯಸ್ ಕಾನ್‍ಸ್ಟಂಟೈನಸ್) : 280-337. ಮಹಾಶಯನೆಂದು ಹೆಸರಾದ ಮೊದಲನೆಯ ಕ್ರೈಸ್ತ ರೋಮನ್ ಚಕ್ರವರ್ತಿ (306-337). 1ನೆಯ ಕಾನ್‍ಸ್ಟಾಂಷಿಯಸ್ ಕ್ಲೋರಸನಿಗೆ (293-306) ಅವನ ಮೊದಲನೆಯ ಹೆಂಡತಿ ಹೆಲೆನಳಲ್ಲಿ ಜನಿಸಿದ. ಕಾನ್‍ಸ್ಟಾಂಷಿಯಸನಿಗೆ ಸೀಸರ್ ಎಂಬ ಪದವಿಯನ್ನು ನೀಡಿದಾಗ (293) ಅವನ ಮಗ ಕಾನ್‍ಸ್ಟಂಟೈನ್ ಡೆಯೊಕ್ಲಿಷಿಯಸ್ ಚಕ್ರವರ್ತಿಯ ಆಸ್ಥಾನದಲ್ಲಿದ್ದ. ಅಲ್ಲಿ ಈತ ಪ್ರಚಾರಕ್ಷಕನಾಗಿ ನೇಮಕಗೊಂಡ. ಕ್ರೈಸ್ತರ ಬಗ್ಗೆ ಭಿಷ್ಯ ವಾಣಿಯನ್ನು ಡಯೊಕ್ಲೀಷಿಯನ್ ತರಿಸಿಕೊಂಡಾಗ ಕಾನ್‍ಸ್ಟಂಟೈನನೂ ಅಲ್ಲಿದ್ದ. 303 ರಲ್ಲಿ ಕ್ರೈಸ್ರರಿಗೆ ನೀಡಲಾದ ಚಿತ್ರ ಹಿಂಸೆಯನ್ನು ಇವನೂ ನೋಡಿಯೇ ಇದ್ದಿರಬೇಕು. 305 ರಲ್ಲಿ ಇವನ ತಂದೆಗೆ ಪಶ್ಚಿಮ ಪ್ರಾಂತ್ಯಗಳ ಆಗಸ್ಟಸ್ ಪದವಿ ದತ್ತವಾದಾಗ ಇವನೂ ತನ್ನ ತಂದೆಯನ್ನು ಕೂಡಿಕೊಳ್ಳಬಯಸಿದ. ಆದರೆ ಪೂರ್ವಪ್ರಾಂತ್ಯಗಳ ಆಗಸ್ಟಸ್ ಆಗಿದ್ದ ಗಲೀರಿಯಸ್ ಇವನನ್ನು ಬಿಟ್ಟು ಕೊಡಲಿಲ್ಲ. ಆದರೂ ಈತ ಗಾಲಿಗೆ ತಪ್ಪಿಸಿಕೊಂಡು ಹೋದ; ತಂದೆಯೊಂದಿಗೆ ಬ್ರಿಟನಿಗೆ ಹೋದ. 306 ರಲ್ಲಿ ತಂದೆ ಕಾಲವಾದಾಗ ಅವನ ಸೈನ್ಯ ಇವನನ್ನೇ ಆಗಸ್ಟಸ್ ಎಂದು ಸಾರಿತು. ಗಲೀರಿಯಸ್ ವಿಧಿಯಿಲ್ಲದ ಅವನನ್ನು ಸಸೀರ್ ಎಂದು ಒಪ್ಪಿಕೊಂಡ. ಆದರೆ ರೋಮನ್ ಚಕ್ರವರ್ತಿ ಮ್ಯಾಕ್ಸಿಮಿಯನನ ಮಗ ಮ್ಯಾಕ್ಸೆನ್ಷಿಯಸ್ 306 ರಲ್ಲಿ ಇಟಲಿಯಲ್ಲಿ ದಂಗೆಯೆದ್ದಾಗ ಕಾನ್‍ಸ್ಟಂಟೈನ್ ಮ್ಯಾಕ್ಸಿಮೀಯನನಿಗೆ ಸ್ನೇಹದ ಕೈಚಾಚಿದ. ಮ್ಯಾಂಕ್ಸಿಮೀಯನ್ ಮತ್ತೆ ಸಿಂಹಾಸನವನ್ನು ಸಂಪಾದಿಸಿಕೊಂಡಾಗ ಕಾನ್‍ಸ್ಟಂಟೈನನನ್ನು ಆಗಸ್ಟಸ್ ಎಂದು ಪುರಸ್ಕರಿಸಿದನಲ್ಲದೆ ಅವನಿಗೆ ತನ್ನ ಪುತ್ರಿ ಫಾಸ್ಟಳನ್ನು ಕೊಟ್ಟು ಮದುವೆ ಮಾಡಿದ (307). ಆದರೆ ಮ್ಯಾಕ್ಸಿಮೀಯನ್ ಮಗನೊಂದಿಗೆ ಜಗಳವಾಡಿಕೊಂಡು ಅಳಿಯನಲ್ಲಿಗೆ ಬಂದು ಆಶ್ರಯ ಪಡೆದ. ಆದರೆ ಕಾನ್‍ಸ್ಟಂಟೈನ್ ಇಲ್ಲದಾಗ ಅವನು ಅರಲೇಟಿನಲ್ಲಿ ದಂಗೆಯೆದ್ದ. ಆದರೆ ಅದನ್ನು ಹತ್ತಿಕ್ಕಲಾಯಿತು. ಮ್ಯಾಕ್ಸಿಮೀಯನ್ ಆತ್ಮಹತ್ಯೆ ಮಾಡಿಕೊಂಡ. ಆಗ ಕಾನ್‍ಸ್ಟಂಟೈನ ತಾನು ಎರಡನೆಯ ಕ್ಲಾಡಿಯಸನ ವಂಶದವನೆಂದೂ ಆದ್ದರಿಂದ ಡಯೊಕ್ಲಿಷಿಯನನಿಗಿಂತಲೂ ಅವನು ನೇಮಕ ಮಾಡಿದ ಅಧಿಕಾರಿಗಳಿಗಿಂತಲೂ ತನಗೆ ಚಕ್ರಾಧಿಪತ್ಯದ ಮೇಲೆ ಹೆಚ್ಚು ಅಧಿಕಾರ ಇರುವುದಾಗಿಯು ವಾದಿಸಿದ.

 ಗಾಲಿನ ಚಕ್ರವರ್ತಿಯಾಗುವಷ್ಟಕ್ಕೆ ಕಾನ್‍ಸ್ಟಂಟೈನನ ಆಕಾಂಕ್ಷೆ ತಣಿಯಲಿಲ್ಲ. ಈತ ಇಟಲಿಯನ್ನಾಕ್ರಮಿಸಿದ. ಸೆನೆಟ್ ಇವನನ್ನು ಹಿರಿಯ ಆಗಸ್ಟನ್ ಎಂದು ಒಪ್ಪಿಕೊಂಡಿತು. ಪಶ್ಚಿಮದ ಎಲ್ಲ ಪಾಂತ್ಯಗಳೂ ಇದಕ್ಕೆ ಸಮ್ಮತಿ ನೀಡಿದವು. ಪೂರ್ವದ ಕೆಲವು ಪ್ರಾಂತ್ಯಗಳನ್ನಾಳುತ್ತಿದ್ದ ಲೈಸಿನೀಯಸ್ ಇವನ ಸ್ನೇಹ ಬೆಳೆಸಿದ; ಕಾನ್‍ಸ್ಟಂಟೈನನ ಮಗಳನ್ನು ವಿವಾಹವಾದ. ಅನಂತರ ಆತ ಎಲ್ಲ ಪೂರ್ವಪ್ರಾಂತ್ಯಗಳ ಏಕೈಕ ಅಧಿಪತಿಯಾದಾಗ ಕಾನ್‍ಸ್ಟಂಟೈನನೂ ಆತನೂ ಪರಸ್ಪರ ಸೌಹಾರ್ದ ನೀತಿ ಅನುಸರಿಸಿದರು. ಎಲ್ಲ ಧರ್ಮಗಳನ್ನೂ ಸಮಾನವಾಗಿ ಕಾಣುವುದಾಗಿಯೂ ಕ್ರೈಸ್ತರಿಗಾಗಿದ್ದ ಅನ್ಯಾಯಗಳನ್ನು ಸರಿಪಡಿಸುವುದಾಗಿಯೂ ಘೋಷಣೆ ಹೊರಡಿಸಲಾಯಿತು. ಕಾನ್‍ಸ್ಟಂಟೈನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋದ. ಚರ್ಚುಗಳಿಗೆ ಧಾರಾಳವಾಗಿ ಧನದಾನವಾಯಿತು. ಪುರೋಹಿತರಿಗೆ ವಿಶೇಷ ಸ್ಥಾನಮಾನಗಳು ಲಭಿಸಿದುವು. ಅನೇಕ ಪ್ರಬಲಶತ್ರುಗಳನ್ನು ನಿವಾರಿಸಿ ಸಾಮ್ರಾಟ ಪದವಿಗೇರುವುದು ದೈವಸಹಾಯವಿಲ್ಲದೆ ಸಾಧ್ಯವೇ ಇಲ್ಲ ನಂಬಿದ್ದ ಕಾನ್‍ಸ್ಟಂಟೈನ್ ಎಲ್ಲ ಮತಧರ್ಮಗಳಿಗೂ ಒಂದೇ ರೀತಿಯ ಗೌರವ ನೀಡಿದ್ದು ಆಶ್ವರ್ಯವೇನಲ್ಲ ; ನಾನಾರೀತಿಯ ಕಷ್ಟಸಂಕಟಗಳಿಗೀಡಾಗಿ ದೊರೆಗಳ ದಂಡನೆಯನ್ನು ಸಹಿಸುತ್ತ ಅಚಲಶ್ರದ್ಧೆಯಿಂದ ಯೇಸುವಿನ ಸಂದೇಶವನ್ನನುಸರಿಸಿಕೊಂಡು ಬಂದಿದ್ದ ಕ್ರೈಸ್ತರ ಪರವಾಗಿ ಸಹಜವಾಗಿ ಇವನ ಮನವೊಲಿದಿತ್ತು. ಇವನ ಕಾಲದಲ್ಲಾದ ಕೆಲವು ಸುಧಾರಣೆಗಳು ಕ್ರೈಸ್ತಧರ್ಮದಿಂದ ಪ್ರಭಾವಿತವಾಗಿದ್ದುವು. ರೋಮಿನಲ್ಲಿ ಹೊಸ ಕ್ರೈಸ್ತ ಪ್ರಾರ್ಥನಮಂದಿರಗಳನ್ನು ನಿರ್ಮಿಸಿದ. ಭಾನುವಾರ ಸಾರ್ವಜನಿಕ ಬಿಡುವಿನ ದಿನವಾಯಿತು. ಕ್ರೈಸ್ತಧರ್ಮಾಧಿಕಾರಿಗಳಿಗೆ ಧರ್ಮಸಂಸ್ಥೆಗಳ ಆಡಳಿತದಲ್ಲಿ ಹೆಚ್ಚು ಅಧಿಕಾರ ಕೊಟ್ಟ. ಅವಿವಾಹಿತರು ದಂಡನೆಯನ್ನನುಭವಿಸಬೇಕೆಂಬ ನಿಯಮವನ್ನು ರದ್ದುಗೊಳಿಸಿದ. ಕ್ರೈಸ್ತಧರ್ಮೀಯರಲ್ಲೇ ಬೆಳೆಯತೊಡಗಿದ್ದ ಧಾರ್ಮಿಕ ಭಿನ್ನಾಭಿಪ್ರಾಯಗಳನ್ನು ನಿವಾರಿಸಲೆತ್ನಿಸಿದ. ಇಂಥ ಒಡಕುಗಳು ಇರಲೇಕೂಡದೆಂದು ಇವನು ನಂಬಿದ್ದ.

 ಕ್ರಮೇಣ ಇವನ ಮತ್ತು ಲೈಸಿನೀಯಸನ ಸಂಬಂಧ ಕೆಟ್ಟಿತು. ಕಾನ್‍ಸ್ಟಂಟೈನ್‍ನ ಅತಿಯಾದ ಕ್ರೈಸ್ತಶ್ರದ್ಧೆ ಲೈಸಿನೀಯಸನಿಗೆ ಒಪ್ಪಿಗೆಯಾಗಲಿಲ್ಲ 314-315 ರಲ್ಲಿ ಅವರ ನಡುವೆ ಯುದ್ಧ ಪ್ರಾರಂಭವಾಯಿತು. ಸೋತ ಲೈಸಿನೀಯಸ್ ತನಗೆ ಸೇರಿದ್ದ ಕೆಲವು ಪ್ರಾಂತ್ಯಗಳನ್ನು ಕಾನ್‍ಸ್ಟಂಟೈನ್‍ನಿಗೆ ಬಿಟ್ಟುಕೊಡಬೇಕಾಯಿತು. ಕೆಲಕಾಲದ ಮೇಲೆ (323) ಪುನಃ ಯುದ್ಧ ಪ್ರಾರಂಭವಾಯಿತು. ಆಡ್ರಿಯಾನೋಪಲ್ (ಈಗಿನ ಎಡಿರ್ನೆ ; ತುರ್ಕಿಯಲ್ಲಿದೆ) ಕ್ರಿಸೋಪೊಲಿಸ್‍ಗಳಲ್ಲಿ (ಉಸ್ಕುಡಾರ್) ಕದನಗಳು ನಡೆದು ಲೈಸಿನೀಯಸ್ ಸೋತು ಶರಣಾಗತವಾದ. ಪುನಃ ದಂಗೆಯೇಳುವ ಪ್ರಯತ್ನ ಮಾಡಿದುದರ ಫಲವಾಗಿ ಸಿಂಹಾಸನವನ್ನು ಕಳೆದುಕೊಂಡು ಕಾನ್‍ಸ್ಟಂಟೈನ್ ಪೂರ್ವ-ಪಶ್ವಿಮ ಭಾಗಗಳನ್ನೊಳಗೊಂಡ ವಿಶಾಲ ಸಾಮ್ರಾಜ್ಯದ ಚಕ್ರವರ್ತಿಯಾದ.

 ರೋಂ ಚಕ್ರಾಧಿಪತ್ಯ ಮುಂದೆ ಕ್ರೈಸ್ತಧರ್ಮದ ನೆಲೆವೀಡಾಯಿತು. ಈ ಮಹತ್ಕಾರ್ಯದ ಸಾಧನೆಗಾಗಿಯೇ ದೇವರು ತನಗೆ ಇಂಥ ಸಾಮ್ರಾಜ್ಯ ದೊರಕುವಂತೆ ಮಾಡಿದನೆಂದು ನಂಬಿದ್ದ ಕಾನ್‍ಸ್ಟಂಟೈನ್ ಇದರ ಸ್ಮರಣಾರ್ಥವಾಗಿ ಬಿಜಾóಂಟಿಯಂ ನಗರವನ್ನು ಬೃಹತ್ಪ್ರಮಾಣದ ನಗರವನ್ನಾಗಿ ಬದಲಾಯಿಸಿ ಅದಕ್ಕೆ ಕಾನ್‍ಸ್ಟಂಟಿನೋಪಲ್ (ನೋಡಿ- ಕಾನ್‍ಸ್ಟಂಟಿನೋಪಲ್) ಎಂಬ ಹೆಸರನ್ನಿತ್ತ (330). ಅಲ್ಲಿ ಸುಂದರವಾದ ದೊಡ್ಡ ಕ್ರೈಸ್ತಪ್ರಾರ್ಥನಾ ಮಂದಿರಗಳನ್ನು ಕಟ್ಟಿಸಿದ. ಲೈಸಿನೀಯಸನ ಆಳ್ವಿಕೆಯಲ್ಲಿ ಹಿಂಸೆಗೊಳಗಾಗಿದ್ದ ಕ್ರೈಸ್ತರಿಗೆ ಪರಿಹಾರ ದೊರಕಿತು. 337 ರಲ್ಲಿ ಪರ್ಷಿಯದೊಂದಿಗೆ ಯುದ್ಧ ಆರಂಭಿಸಿದಾಗ ಯುದ್ದರಂಗಕ್ಕೆ ಹೊರಡುವ ಮುನ್ನ ಕಾಯಿಲೆ ಬಿದ್ದು ಮೃತನಾದ.

 ಸಾಮ್ರಾಜ್ಯದ ಪೂರ್ವಭಾಗದಲ್ಲಿದ್ದ ಕ್ರೈಸ್ತರಲ್ಲಿ ಮತತತ್ತ್ವಗಳ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಹುಟ್ಟಿದ್ದುವು. ಕ್ರೈಸ್ತಧರ್ಮ ಒಂದೇಯೆಂದೂ ಕ್ರೈಸ್ತರಲ್ಲಿ ಒಡಕುಂಟಾದರೆ ಅದರಿಂದ ಸಾಮ್ರಾಜ್ಯಕ್ಕೆ ಅಪಾಯವೆಂದೂ ನಂಬಿದ್ದ ಕಾನ್‍ಸ್ಟಂಟೈನ್ ಈ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲೆತ್ನಿಸಿದ. ಸಿಸೀಯ ಎಂಬಲ್ಲಿ ಅಖಿಲ ಕ್ರೈಸ್ತ ಸಮ್ಮೇಳನವೊಂದನ್ನೇರ್ಪಡಿಸಿ. ಅದಕ್ಕೆ ತಾನೇ ಅಧ್ಯಕ್ಷನಾಗಿ ನಿಂತು, ಅದರ ನಿರ್ಣಯಗಳನ್ನು ಎಲ್ಲರೂ ಒಪ್ಪುವಂತೆ ಮಾಡಿದ. ಆದರೂ ಈ ಒಡಕು ಸಂಪೂರ್ಣವಾಗಿ ಪರಿಹಾರವಾಗಲಿಲ್ಲ. ವಯಸ್ಸು ಕಳೆದಂತೆ ಇವನು ಹೆಚ್ಚುಹೆಚ್ಚಾಗಿ ಕ್ರೈಸ್ತಧರ್ಮ ನಿಷ್ಠೆ ಹೊಂದಿ, ಧರ್ಮಜಿಜ್ಞಾಸೆ ಪ್ರಾರ್ಥನೆಗಳಲ್ಲಿ ಕಾಲ ಕಳೆಯತೊಡಗಿದ. ಪ್ಯಾಲೆಸ್ಟೈನ್ ಮತ್ತು ಇತರ ಕಡೆಗಳಲ್ಲಿ ಪ್ರಾರ್ಥನ ಮಂದಿರಗಳಲ್ಲಿ ಕಟ್ಟಿಸಿದ. ಕ್ರೈಸ್ತ ಧರ್ಮದ ವಿಷಯವಾಗಿ ಇವನು ಹೊಂದಿದ್ದ ಆಸಕ್ತಿಯನ್ನು ಕಂಡ ಅನೇಕರು ತಾವೂ ಕ್ರೈಸ್ತರಾದರು. ಆದರೆ ಇವನ ಕ್ರೈಸ್ತಧರ್ಮಶ್ರದ್ದೆ ಬೆಳೆದಂತೆಲ್ಲ ಇತರ ಧರ್ಮಿಯರ ವಿಷಯದಲ್ಲಿ ಅಸಹನೆ ಬೆಳೆಯಿತು. ತನ್ನ ನಿರೂಪಗಳಲ್ಲಿ ಎಲ್ಲರೂ ಪರಧರ್ಮ ಸಹಿಷ್ಣುತೆಯನ್ನು ಹೊಂದಿರಬೇಕೆಂದು ಹೇಳುತ್ತಿದ್ದರೂ ಸೈಲೀಷಿಯದಲ್ಲೂ ಫಿನಿಷಿಯದಲ್ಲೂ ಪ್ರಖ್ಯಾತ ಕ್ರೈಸ್ತೇತರ ದೇವಮಂದಿರಗಳನ್ನು ನಾಶಗೊಳಿಸಿ ಅವುಗಳ ಅಪಾರ ಸಂಪತ್ತನ್ನು ವಶಪಡಿಸಿಕೊಂಡ.

 ಸಾಮ್ರಾಜ್ಯದ ನಾನಾಕಡೆಗಳಲ್ಲಿದ್ದ ನುರಿತ ಯೋಧರನ್ನೆಲ್ಲ ಕಾನ್‍ಸ್ಟಂಟೈನ್ ಬರಮಾಡಿಕೊಂಡು ತನ್ನ ಮೈಗಾವಲು ಪಡೆಯನ್ನು ದೊಡ್ಡ ಸೈನ್ಯವನ್ನಾಗಿ ಪರಿವರ್ತಿಸಿದ. ಹಿಂದಿನಿಂದ ಬಂದಿದ್ದ ಪ್ರಿಟೋರಿಯನ್ಸ್ ಎಂಬ ಅಂಗರಕ್ಷಕ ಪಡೆ ಕ್ಷೀಣಿಸಿತು. ಕಾನ್‍ಸ್ಟಂಟೈನ್ ಬಲು ಧಾರಾಳಿ. ಆದ್ದರಿಂದ ಹಣದ ಕೊರತೆ ನೀಗಿಸಿಕೊಳ್ಳಲು ಹೊಸ ತೆರಿಗೆಗಳನ್ನು ವಿಧಿಸಬೇಕಾಯಿತು. ಆದರೂ ಇವನ ಆಳ್ವಿಕೆಯಲ್ಲಿ ಒಟ್ಟಿನಲ್ಲಿ ನೆಮ್ಮದಿಯಿತ್ತು. 323ರಲ್ಲಿ ಇವನು ಒಟ್ಟುಗೂಡಿಸಿದ ರೋಮನ್ ಸಾಮ್ರಾಜ್ಯ ಇವನ ಮರಣಾನಂತರವೂ (337) ಸುಮಾರು ಅರ್ಧ ಶತಮಾನ ಕಾಲ ಒಂದಾಗಿಯೇ ಉಳಿಯಿತು. ಇದರ ಪರಿಣಾಮವಾಗಿಯೇ ಇವನು ಸಾಮ್ರಾಜ್ಯದ ರಾಜಕೀಯ ಮತ್ತು ಧಾರ್ಮಿಕ ರಂಗಗಳ ಸಮನ್ವಯವನ್ನು ಸಾಧಿಸಲು ಶಕ್ಯವಾದದ್ದು.    (ಎ.ಎಂ.; ಪಿ.ಎಂ.ಯು.ಎಸ್.)

 5ನೆಯ ಕಾನ್‍ಸ್ಟಂಟೈನ್ (ಕೊಪ್ರೊನಿಮಸ್) : 718-775. ಉತ್ತರ ಸಿರಿಯದ ದೊರೆಯಾಗಿದ್ದ 3ನೆಯ ಲಿಯೊನ ಮಗ ಮತ್ತು 741ರಿಂದ 775ರ ವರೆಗೆ ಬಿಜಾóಂಟಿನ್ ಚಕ್ರವರ್ತಿ. ಸಿಂಹಾಸನಕ್ಕೆ ಬಂದ ಕೆಲಕಾಲದಲ್ಲೆ ಇವನ ಭಾವ ಅರ್ಟಬಸ್‍ಡಸ್ ಪ್ರತಿಕಕ್ಷಿಯಾಗಿ ಚಕ್ರವರ್ತಿಯೆಂದು ಸಾರಿಕೊಂಡ; ಅರಬರ ವಿರುದ್ದವೂ ಈತ ಹೋರಾಡಬೇಕಾಯಿತು. 743ರಲ್ಲಿ ಈ ತೊಂದರೆಗಳಿಂದ ಪಾರಾಗಿ ಈತ ರಾಜಧಾನಿ ಕಾನ್‍ಸ್ಟಾಂಟಿನೋಪಲನನ್ನು ಪುನಃ ಪ್ರವೇಶಿಸಿದ. 754ರಲ್ಲಿ 338 ಮಂದಿ ಬಿಷಪರ ಸಮ್ಮೇಳನವೊಂದನ್ನು ನಡೆಸಿ ವಿಗ್ರಹಾರಾಧನೆಯನ್ನು ಬಹಿಷ್ಕರಿಸುವ ನಿರ್ಣಯ ಮಾಡಿಸಿದರೂ ವಿಗ್ರಹಾರಾಧನೆಯ ಪರವಾಗಿದ್ದ ಕ್ರೈಸ್ತ ಸನ್ಯಾಸಿಗಳು ಇದನ್ನು ಪ್ರತಿಭಟಿಸಿದರು. ಕಾನ್‍ಸ್ಟಂಟೈನ್ ಈ ವಿರೋಧವನ್ನು ಹತ್ತಿಕ್ಕಿದ. ಈತ ಉತ್ತಮ ಸೈನಾಧಿಕಾರಿಯಾಗಿದ್ದ. 747ರಲ್ಲಿ ಭೂ ಮತ್ತು ನೌಕಾ ಯುದ್ದಗಳಲ್ಲಿ ಅರಬರನ್ನು ಸೋಲಿಸಿದ. ಅನಂತರ ಅರ್ಮೇನಿಯ ಮತ್ತು ಮೆಸೊಪೊಟೇಮಿಯಗಳನ್ನು ಗೆದ್ದರೂ ಬಹುಕಾಲ ಅವು ಇವನ ವಶದಲ್ಲಿ ಉಳಿಯಲಿಲ್ಲ. ತನ್ನ ಅಂತ್ಯದ ವರೆಗೂ ಬಾಲ್ಕನ್ ಸಮುದ್ರ ಪ್ರದೇಶದಲ್ಲಿ ಬಲ್ಗೇರಿಯ ರಾಜ್ಯದೊಡನೆ ಹೋರಾಡುತ್ತಿದ್ದು. 775ರ ಸೆಪ್ಟಂಬರ್ 14ರಂದು ಯುದ್ಧನಿರತನಾಗಿದ್ದಾಗಲೇ ಮೃತನಾದ.

 ಈತ ಈ ಯುದ್ದಗಳಲ್ಲಿ ತೊಡಗಿದ್ದಾಗ ಇಟಲಿಯಲ್ಲಿ ಲಂಬಾರ್ಡರು ಇವನ ವಿರುದ್ದ ಸಂಚು ನಡೆಸುತ್ತಿದ್ದರು. ಮೊದಲಿಗೆ ವಿಗ್ರಹಾರಾಧನೆಯ ಪರವಾಗಿ ಹೋರಾಡುತ್ತಿದ್ದರೂ ಪೋಪ್ ಇವನಿಗೆ ವಿಧೇಯನಾಗಿದ್ದ ; ಆದರೆ ತರುವಾಯ ಇವನ ಶತ್ರುಗಳ ಜೊತೆ ಸೇರಿದ. ಇದರಿಂದ ಇಟಲಿ ಪ್ರದೇಶದಲ್ಲಿ ಬಿಜಾóಂಟಿನ್ ಧಿಕಾರ ನಶಿಸಿ, ದಕ್ಷಿಣ ಕೆಲಭಾಗಗಳು ಮಾತ್ರ ಇದರ ಅಂಕೆಯಲ್ಲುಳಿದವು.

 7 ನೆಯ ಕಾನ್‍ಸ್ಟಂಟೈನ್ (ಪಾರ್‍ಫಿರೊಜೆನಿಟಸ್): 905-959, ಬಿಜಾóಂಟಿನ್ ಚಕ್ರವರ್ತಿ, ಸ್ವತಃ ಲೇಖಕರಿಗೆ ಆಶ್ರಯದಾತ. ಪಾರ್‍ಫಿರೊಜೆನಿಟಸ್ ಎಂದರೆ ರಾಜಮನೆತನದಲ್ಲಿ ಹುಟ್ಟಿದವನೆಂದು ಅರ್ಥ. ಈತ 913 ರಿಂದ ಚಕ್ರವರ್ತಿಯಾಗಿದ್ದರೂ ತನ್ನ ಮಾವನಾದ ಮೊದಲನೆಯ ರೊಮಾನಸ್ ಲೆಕಾಪಿನಸನನ್ನು 944ರಲ್ಲಿ ದೇಶಭ್ರಷ್ಟನನ್ನಾಗಿ ಮಾಡುವವರೆಗೂ ಅಧಿಕಾರ ಇವನ ವಶವಾಗಿರಲಿಲ್ಲ. 945ರ ಅನಂತರದ ಕಾಲದಲ್ಲಿ ಈತ ತನ್ನ ಆಡಳಿತದಲ್ಲಿದ್ದ ಸಣ್ಣರೈತರ ಮತ್ತು ಸೈನಿಕರ ಆಸ್ತಿಯ ರಕ್ಷಣೆಯ ಕ್ರಮ ಕೈಕೊಂಡನಲ್ಲದೆ ಪೂರ್ವ ಮೆಡಿಟರೇನಿಯನ್ ಪ್ರಾಂತ್ಯದಲ್ಲಿ ಅರಬರ ವಿರುದ್ದ ಹೋರಾಟಕ್ಕೆ ಗಮನ ನೀಡಿದ. ಹೊರ ದೇಶಗಳೊಡನೆ ಈತ ಉತ್ತಮ ಸಂಪರ್ಕ ಹೊಂದಿದ್ದ; ಕ್ರೈಸ್ತಮತಕ್ಕೆ ಹೊಸದಾಗಿ ಪರಿವರ್ತನೆ ಹೊಂದಿದ್ದ ರಷ್ಯನ್ ರಾಜಕುಮಾರಿ ಓಲ್ಗಾ 957ರಲ್ಲಿ ಇವನ ಆಸ್ಥಾನಕ್ಕೆ ಭೇಟಿ ನೀಡಿದಳು.

 ಕಾನ್‍ಸ್ಟಂಟೈನ್ ಖ್ಯಾತಿ ಗಳಿಸಿರುವುದು ರಾಜ್ಯಾಡಳಿತಕ್ಕಿಂತಲೂ ಅಧಿಕವಾಗಿ ಕಲೆ ಸಾಹಿತ್ಯಗಳಿಗೆ ನೀಡಿದ ಪ್ರೋತ್ಸಾಹದಿಂದಾಗಿ. ಪ್ರಾಚೀನ ಗ್ರೀಕ್ ಮತ್ತು ಲ್ಯಾಟಿನ್ನರ ಐತಿಹಾಸಿಕ ಅವಶೇಷಗಳ ಅಧ್ಯಯನದಲ್ಲಿ ಈತನಿಗೆ ಹೆಚ್ಚು ಆಸಕ್ತಿಯಿತ್ತು. ಬಿಜಾóಂಟಿನ್ ಸಾಮ್ರಾಜ್ಯದ ಬಗ್ಗೆ ಇವನು ಸ್ವತಃ ಬರೆದ. ಇವನ ಪ್ರೇರಣೆಯಿಂದ ರಚಿತವಾದ ಗ್ರಂಥಗಳಿಂದ ಅಮೂಲ್ಯಮಾಹಿತಿಗಳು ದೊರಕುತ್ತವೆ. ಇವನ ಗ್ರಂಥಗಳ ಪೈಕಿ ಡಿ ಅಡ್ಮಿನಿಸ್ಟ್ರಾಂಡೊ ಇಂಪೀರಿಯೊ ಎಂಬುದು ವಿದೇಶಾಂಗ ಕಛೇರಿಯನ್ನು ಕುರಿತ ಕೈಪಿಡಿ; ಡಿ ಸೆರಿಮೋನೀಸ್ ಅವುಲೇ ಬಿಸಾóಂಟಿನೇ ಎಂಬುದು ಬಿಜಾóಂಟಿನ್ ಚರ್ಚ್‍ನ ಕಟ್ಟಳೆಗಳನ್ನೂ, ಆಚಾರಗಳನ್ನೂ ವರ್ಣಿಸುವ ಕೃತಿ; ಥಿಯೋಫನೀಸ್ ಕಾಂಟಿನಾಟಸ್ ಎಂಬ ಪುಸ್ತಕದ ಐದನೆ ಸಂಪುಟದಲ್ಲಿ ಇವನ ತಾತನ (1ನೇ ಬೇಸಿಲ್) ಜೀವನ ಪರಿಚಯವಿದೆ. ಇವನ ಆಶ್ರಯದಲ್ಲಿ ವಿಶ್ವಕೋಶಸದೃಶವಾದ ಮತ್ತು ಪುರಾತನರ ಕೃತಿಗಳಿಂದ ಆಯ್ದ ಭಾಗಗಳನ್ನೊಳಗೊಂಡ ಅನೇಕ ಗ್ರಂಥಗಳು ರಚಿತವಾದವು.

 9ನೆಯ ಕಾನ್‍ಸ್ಟಂಟೈನ್ (ಮಾನೊಮ್ಯಾಕಸ್) : ಸು. 980-1055. 1042 ರಿಂದ 1055ರ ವರೆಗೆ ಆಳಿದ ಬಿಜಾóಂಟಿನ್ ಚಕ್ರವರ್ತಿ. ಮ್ಯಾನೊಮ್ಯಾಕಸ್ ಎಂದರೆ ಏಕಾಂಗವೀರ. ಮ್ಯಾಸಿಡೋನಿಯನ್ ಚಕ್ರವರ್ತಿನಿ ಸೋ ಇವನನ್ನು ತನ್ನ ಮೂರನೆಯ ಪತಿಯಾಗಿ ಸ್ವೀಕರಿಸಿದುದರಿಂದ ಇವನಿಗೆ ಚಕ್ರವರ್ತಿ ಪದವಿ ದೊರೆಕಿತು. ಈತ ಸೈನ್ಯಾಧಿಕಾರದ ವಿರೋಧಿಗಳಾದ ನಾಗರಿಕರ ಪಕ್ಷಕ್ಕೆ ಸೇರಿದ್ದುದರಿಂದ, ಸೈನ್ಯ ಬಲವನ್ನದು ಕುಂಠಿತಗೊಳಿಸಿತು. ವೈಭವ ಜೀವನ ಮತ್ತು ಉಜ್ಜ್ವಲ ಕಟ್ಟಡಗಳ ರಚನೆಗಾಗಿ ಅಧಿಕವಾಗಿ ವೆಚ್ಚ ಮಾಡಿದುದರಿಂದ ಸಂಭವಿಸಿದ ಹಣದ ಅಭಾವವನ್ನು ನಿವಾರಿಸಲು ನಾಣ್ಯಗಳಿಗೆ ಈತ ಕೀಳ್ಬೆರಕೆ ಮಾಡಿದ. ಉತ್ತರ ಭಾಗದಲ್ಲಿ ನಾರ್ಮನರು ಬಿಜಾóಂಟಿನ್ ಸಾಮ್ರಾಜ್ಯಕ್ಕೆ ಸೇರಿದ ಇಟಲಿಯ ಪ್ರದೇಶಗಳನ್ನು ಆಕ್ರಮಿಸಿಕೊಂಡರು. ಥ್ರೇಸ್ ಮತ್ತು ಮ್ಯಾಸಿಡೋನಿಯ ಪ್ರಾಂತ್ಯಗಳು ಪೆಜೆನಗ್ಗರ ವಶವಾದುವು. ಆರ್ಮೇನಿಯಾದ ಎಲ್ಲೆಯಲ್ಲಿ ಸೆಲ್ಜುಕ್ ತುರ್ಕರು ಆಕ್ರಮಣ ನಡೆಸಿದರು. ಆರ್ಮೇನಿಯದ ಆನಿ ರಾಜ್ಯ ಸ್ವತಂತ್ರವಾಯಿತು. ಹೀಗೆ ಎಲ್ಲ ದಿಕ್ಕುಗಳಿಂದಲೂ ತೊಂದರೆಗೊಳಗಾದಾಗ ಈತ ಇಟಲಿಯ ಪೋಪ್ ಗುರುವಿನ ನೆರವು ಬೇಡಿದ. ಆದರೆ ಪರಸ್ಪರ ಸೌಹಾರ್ದ ಕಳೆದುಕೊಂಡಿದ್ದ ಎರಡು ಪಕ್ಷಗಳಲ್ಲಿ ಸಾಮರಸ್ಯವೇರ್ಪಡುವುದು ಸಾಧ್ಯವಾಗಲಿಲ್ಲ. 1054ರಲ್ಲಿ ಪೋಪನ ಪ್ರತಿನಿಧಿಗಳು ಕಾನ್ ಸ್ಟಾಂಟಿನೋಪಲ್‍ಗೆ ಬಂದಾಗ ಇವರಲ್ಲಿ ಭಿನ್ನಾಭಿಪ್ರಾಯಗಳು ಉಲ್ಪಣಗೊಂಡವು. ರಾಜ್ಯಾಡಳಿತದಲ್ಲಿ ಈ ರೀತಿ ಸಾರ್ವತ್ರಿಕ ಸೋಲನ್ನನುಭವಿಸಿದರೂ ಇವನು ನಿರ್ಮಿಸಿದ ಅಮೋಘ ವಾಸ್ತುಕೃತಿಗಳಿಂದಲೂ ಸಾಹಿತ್ಯ ವಿದ್ಯಾಭ್ಯಾಸಗಳಿಗೆ ಇವನು ನೀಡಿದ ಪ್ರೋತ್ಸಾಹದಿಂದಲೂ ಕಾನ್‍ಸ್ಟಾಂಟಿನೋಪಲ್ ವಿಶ್ವವಿದ್ಯಾಲಯದಲ್ಲಿ ಇವನು ಮಾಡಿದ ಸುಧಾರಣೆಗಳಿಂದಲೂ ಇತಿಹಾಸದಲ್ಲಿ ಸ್ಥಾನಗಳಿಸಿದ್ದಾನೆ.

11 ನೆಯ ಕಾನ್‍ಸ್ಟಂಟೈನ್ (ಡ್ರಗಾಸಿಸ್ ಪೇಲಿಯಾಲೊಗಸ್): 1404-1453. ಬಿಜಾóಂಟಿನ್ ಸಾಮ್ರಾಜ್ಯದ ಕೊನೆಯ ಚಕ್ರವರ್ತಿ(1449-53). 2ನೆಯ ಮ್ಯಾನುಯಲ್ ಮತ್ತು ರಾಣಿ ಹೆಲೆನಳ ಮಗ. ಸಣ್ಣ ವಯಸ್ಸಿನಲ್ಲಿ ಮೋರಿಯ ಪ್ರಾಂತ್ಯಾಧಿಕಾರಿಯಾಗಿದ್ದು ಫ್ರಾಂಕರಿಂದ ಅದನ್ನು ಪೂರ್ಣ ವಶಪಡಿಸಿಕೊಂಡ. ತನ್ನ ಅಣ್ಣ 8ನೆಯ ಜಾನ್ ಸಂತತಿಯಿಲ್ಲದೆ 1448ರಲ್ಲಿ ಸತ್ತ ಅನಂತರ 1449ರ ಜನವರಿಯಲ್ಲಿ ಚಕ್ರವರ್ತಿಯಾದ. ಈತ ಶಕ್ತನೂ ಸಾಹಸಿಯೂ ಆಗಿದ್ದ. 1451ರಲ್ಲಿ ಆಟೋಮನ್ ಸಾಮ್ರಾಜ್ಯದ ಚಕ್ರವರ್ತಿಯಾದ. 2ನೆಯ ಮಹಮ್ಮದ್ ಸರ್ವಸೇನಾಬಲಸಜ್ಜಿತನಾಗಿ ಕಾನ್‍ಸ್ಟಾಂಟಿನೋಪಲ್ ಮೇಲೆ ಏರಿಬಂದಾಗ ಕಾನ್‍ಸ್ಟಾಂಟೈನ್, ಅದರ ಎದುರು ನಿಂತು ಗೆಲ್ಲಲಾಗಲಿಲ್ಲ. 1453ರ ಮೇ 23ರಂದು ಕಾನ್‍ಸ್ಟಾಂಟಿನೋಪಲ್ ಮಹಮ್ಮದನ ವಶವಾಯಿತು. ಕೋಟೆಯ ಗೋಡೆಗಳ ನೆರೆಯಲ್ಲಿ ನಿಂತು ಕಾದಾಡುತ್ತ ಕಾನ್‍ಸ್ಟಾಂಟೈನ್ ಪ್ರಾಣ ತೆತ್ತ.    

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ